ಅಡವಿ ಗೋರಂಟಿ
	
ಎರಿತ್ರೊಕ್ಸೈಲೇಸೀ ಕುಟುಂಬಕ್ಕೆ ಸೇರಿದ ಒಂದು ಕಾಡು ಸಸ್ಯ. ಎರಿತ್ರೊಕ್ಸೈಲಾನ್ ಮಾನೋಗೈನಮ್ ಎಂಬುದು ಇದರ ಶಾಸ್ತ್ರೀಯ ಹೆಸರು. ಇಂಗ್ಲಿಷಿನಲ್ಲಿ ಇದನ್ನು ಬಾಸ್ಟರ್ಡ್ ಸ್ಯಾಂಡಲ್ ಎಂದೂ, ಕನ್ನಡದಲ್ಲಿ ದೇವದಾರಿ, ಚಂಬುಳಿಕೆ, ಗಂಧಗಿರಿ ಇತ್ಯಾದಿ ಇನ್ನಿತರ ಹೆಸರುಗಳಿಂದಲೂ ಕರೆಯಲಾಗುತ್ತದೆ. ಇದು ಶುಷ್ಕತೆ ಹೆಚ್ಚಾಗಿರುವಂಥ ಮುಳ್ಳುಕಂಟಿಗಳಿಂದ ಕೂಡಿರುವ ಬಂಜರು ಕುರುಚಲು ಪ್ರದೇಶಗಳಲ್ಲಿ ಬೆಳೇಯುತ್ತದೆ. 
	
ಇದು ಪೊದೆರೂಪದಲಿ ಬೆಳೆಯುವ ಸಸ್ಯ. ಕೆಲವೊಮ್ಮ ಮರವಾಗಿ ಬೆಳೆಯುವುದೂ ಉಂಟು. ಎಲೆಗಳು ಅರಳ ರೀತಿಯವು. ಕಾಂಡದ ಮೇಲೆ ಪರ್ಯಾಯ ರೀತಿಯಲ್ಲಿ ಜೋಡಣೆಗೊಂಡಿರುವುವು. ಎಲೆಗಳ ಕಕ್ಷದಲ್ಲಿ ಚಿಕ್ಕ ಗಾತ್ರದ ಬಿಳಿ ಹಸುರು ಬಣ್ಣದ ಹೂಗಳು ಅರಳುವುವು. ಹಣ್ಣು ಮಾಗಿದಾಗ ಕೆಂಪುಬಣ್ಣದ್ದಾಗಿರುತ್ತದೆ. 
	
ಇದಕ್ಕೆ ಔಷಧೀಯ ಮಹತ್ತ್ವ ಇದೆ. ಇದರ ಬೇರು ಮತ್ತು ತೊಗಟೆ ಉದರ ಶೂಲೆಗೆ ಮದ್ದಾಗಿ ಬಳಕೆಯಾಗುತ್ತವೆ. ಇದರ ತೈಲಕ್ಕೆ ಚರ್ಮರೋಗ (ಕಜ್ಜಿ, ತುರಿ) ವಾಸಿಮಾಡುವ ಗುಣ ಇದೆ. ಅಡವಿಗೋರಂಟಿಯ ಎಲೆಯ ರಸವನ್ನು ಜೇನುತುಪ್ಪದೊಂದಿಗೆ ಸೇವಿಸಿದರೆ ಬಲ, ವೀರ್ಯ ವೃದ್ಧಿಯಾಗುವುವು.

(ಎ.ಎನ್.ಎಸ್.)
(ಪರಿಷ್ಕರಣೆ: ಕೆ.ಬಿ.ಸದಾನಂದ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ